Letter Writing in Kannada - ಪತ್ರಲೇಖನ ನಮೂನೆಗಳು


(1) ತಂದೆಗೆ ಮಗನ ಪತ್ರ


ಕ್ಷೇಮ ಬಿಜಾಪುರ

09.09.2003

ತೀರ್ಥರೂಪರವರಿಗೆ ಭಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು.

ಉಭಯಕುಶಲೋಪರಿ ಸಾಂಪ್ರತ,

ನನ್ನ ಅಂತಿಮ ಪರೀಕ್ಷೆ ಬೇಗ ಬರುತ್ತಿದೆ. ಕಷ್ಟಪಟ್ಟು ಓದುತ್ತಾ, ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗುವ ಗುರಿ ಉಳ್ಳವನಾಗಿದ್ದೇನೆ. ನನ್ನ ಉಪಾಧ್ಯಾಯರೆಲ್ಲರೂ ಈ ಬಗ್ಗೆ ನನ್ನಲ್ಲಿ ಉತ್ಸಾಹ-ಉತ್ತೇಜನ ತುಂಬುತ್ತಿದ್ದಾರೆ. ನಮ್ಮ ಶೈಕ್ಷಣಿಕ ಪ್ರವಾಸ ಮುಗಿದಿದೆ.

ಮನೆಯಲ್ಲಿ ನನ್ನ ತಂಗಿ, ತುಂಗಾ ಹಾಗೂ ತಮ್ಮ ತರುಣ ಚೆನ್ನಾಗಿ ಓದುತ್ತಿರುವರೆಂದು ಭಾವಿಸಿದ್ದೇನೆ. ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪರೀಕ್ಷೆ ಮುಗಿದನಂತರ ಮಿಕ್ಕ ವಿಷಯಗಳನ್ನು ಸಮಕ್ಷಮ ಮಾತಾಡುತ್ತೇನೆ.

ಇಂತಿ ನಮಸ್ಕಾರಗಳು.

ನಿಮ್ಮ ಪ್ರೀತಿಯ ಮಗ,

(ಸಹಿ) ಭಾನುಚಂದ್ರ

ವಿಳಾಸ

ಇವರಿಗೆ,

ಸನ್ಮಾನ್ಯ ಬಿ.ವಿ. ರಂಗನಾಥರಾವ್

438, 5ನೇ ಅಡ್ಡರಸ್ತೆ,

ಜಿ.ಕೆ, ಡಬ್ಲ್ಯೂ ಲೇಔಟ್,

ಬೆಂಗಳೂರು-560040


(2) ತಂದೆಯಿಂದ ಮಗನಿಗೆ ಮಾರುತ್ತರ


ಕ್ಷೇಮ                                                                                       ವಿಜಯನಗರ

11-9-2003

ಚ II ಭಾನುಚಂದ್ರನಿಗೆ,

ನಿನ್ನ ತಂದೆಯ ಆಶೀರ್ವಾದಗಳು. ಸಾಂಪ್ರತ.

ನಿನ್ನ 9.9.03ರ ಪತ್ರ ಕೈ ಸೇರಿದೆ. ವಿಷಯವೆಲ್ಲವೂ ಅರ್ಥ ಆಗಿದೆ. ನಿನ್ನ ತಾಯಿಗೆ ನಿನ್ನ ಆರೋಗ್ಯದ ಬಗ್ಗೆಯೇ ಕಳವಳಿಸುತ್ತಿದ್ದ ಅವಳಿಗೆ, ನಿನ್ನ ಕಾಗದ ಸಾಕಷ್ಟು ಸಮಾಧಾನ ನೀಡಿದೆ.

ನಿನ್ನ ಅಂತಿಮ ಪರೀಕ್ಷೆ ಸಮೀಪಿಸುತ್ತಿರುವುದರ ಬಗ್ಗೆ ತುಂಬಾ ನಿಗಾ ಇರಲಿ. ಜೀವನದಲ್ಲಿ ಪರೀಕ್ಷೆ ಬರುವುದು ಒಂದೇ ಬಾರಿ. ಚೆನ್ನಾಗಿ ಬರೆದು, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು, ಚೆನ್ನಾಗಿ ಓದು, ಈ ಕಡೆ ಯಾವ ಯೋಚನೆಯನ್ನೂ ಮಾಡಬೇಡ.

ನಿನ್ನ ತಂಗಿ, ತಮ್ಮ ದಿನವೂ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಅವರೂ ಸಹ ತಮ್ಮ ಶಾಲಾ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲು ಶ್ರಮಿಸುತ್ತಿದ್ದಾರೆ.

ಆರೋಗ್ಯದ ಕಡೆ ಗಮನ ಇರಲಿ. ಪರೀಕ್ಷೆಯ ಸಮಯಕ್ಕೆ ಆರೋಗ್ಯ ಹಾಳು ಮಾಡಿಕೊಳ್ಳದೆ ಓದು. ಮಿಕ್ಕ ವಿಷಯ ನೀನು ಮನೆಗೆ ಬಂದನಂತರ,

ಇಂತಿ ಆಶೀರ್ವಾದಗಳು,

ನಿನ್ನ ಪ್ರೀತಿಯ ತಂದೆ

XXX

ವಿಳಾಸ:

ಭಾನುಚಂದ್ರ, ಆರ್.

10ನೇ ತರಗತಿ, 'ಎ' ವಿಭಾಗ,

ರಾಷ್ಟ್ರೀಯ ವಿದ್ಯಾಲಯ

ಪೇಟೆಯ ಬೀದಿ,

ಬಿಜಾಪುರ.








(3) ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆಯ ಪತ್ರ

ಬೆಂಗಳೂರು

4-10-2003

ಇವರಿಗೆ,

ಮುಖ್ಯೋಪಾಧ್ಯಾಯರು

ಕಮಲನೆಹರು ಪ್ರೌಢಶಾಲೆ,

ಬಸವನಗುಡಿ,

ಬೆಂಗಳೂರು-560004

ಮಾನ್ಯರೇ,

ವಿಷಯ: ತಾರೀಖಿ 5.10.2003 ರಿಂದ 7.10.2003

(ಮೂರೂ ದಿನಗಳು ಸೇರಿ)ರವರೆಗೆ ರಜೆಗಾಗಿ ಮನವಿ.

ನನ್ನ ಅಕ್ಕನ ಮದುವೆ 6.10.2003ರಂದು ನಂಜನಗೂಡಿನಲ್ಲಿ ನಡೆಯಲಿರು ವುದರಿಂದ ಕೃಪೆ ಮಾಡಿ 5.10.2003ರಿಂದ 7.10.2003ರವರೆಗೆ (ಮೂರೂ ದಿನಗಳು ಸೇರಿ) ನನ್ನ ಗೈರುಹಾಜರಿಯನ್ನು ಮನ್ನಿಸಿ, ರಜೆ ದಯಪಾಲಿಸಲು ವಿನಮ್ರತೆಯೊಂದಿಗೆ ಪ್ರಾರ್ಥಿಸುತ್ತೇನೆ.

ಇದರೊಂದಿಗೆ ವಿವಾಹದ ಕರೆಯೋಲೆಯೊಂದನ್ನು ಸಹ ತಮಗೆ ತಲುಪಿಸುತ್ತಿದ್ದೇನೆ.

ತಮ್ಮ ವಿಧೇಯ ಶಿಷ್ಯ,

ಬಿ. ರಘುರಾಮ

  10ನೇ ತರಗತಿ, 'ಬಿ' ವಿಭಾಗ,

ಲಗತ್ತಿಸಿರುವುದು

ಮದುವೆಯ ಕರೆಯೋಲೆ.






Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...